ಗದಗ

ಜಕ್ಕಲಿಯಲ್ಲಿ ಗಾಂಧಿ ಮೂರ್ತಿ ನಿರ್ಲಕ್ಷ ್ಯ

Published On :

ಕನ್ನಡಪ್ರಭ ವಾರ್ತೆ ರೋಣ, ಅ. 1
ಬದುಕಲು ಸರಳತೆ, ಸಮಾನತೆ, ಅಹಿಂಸೆ ಮತ್ತು ಸ್ವಾತಂತ್ರ್ಯ ಕಲ್ಪಿಸಿಕೊಟ್ಟು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹಾತ್ಮಾ ಗಾಂಧೀಜಿ ಜಕ್ಕಲಿಗೆ ಬಂದು ಹೋದ ನೆನಪಿಗಾಗಿ ಗ್ರಾಮದ ಉರ್ದು ಕಿರಿಯ ಮತ್ತು ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗಾಂಧೀಜಿ ಮೂರ್ತಿಯನ್ನೆನೋ ನಿರ್ಮಿಸಲಾಗಿದೆ. ಆದರೆ, ವರ್ಷಕ್ಕೊಮ್ಮೆ ಮಾತ್ರ ಮಹಾತ್ಮನಿಗೆ ಪೂಜೆ ಸಲ್ಲಿಸುತ್ತಿರುವುದು ವಿಪರ್ಯಾಸವಾಗಿದೆ.
ಸ್ವಚ್ಛತೆಯಿಲ್ಲ: ರಾತ್ರಿಯಾಯಿತೆಂದರೆ ಇಲ್ಲಿ ಕಿಡಿಗೇಡಿಗಳ ದಂಡು ಜಮಾಯಿಸುತ್ತದೆ. ಖಾಲಿ ಕುಳಿತು ಹರಟುವದಲ್ಲದೇ ಮಹಾತ್ಮನಿಗೆ ಗೌರವ ನೀಡುತ್ತಿಲ್ಲ. ಬೆಳಕಿನ ವ್ಯವಸ್ಥೆಯಿಲ್ಲ. ಅಂದು ಜಕ್ಕಲಿ ಗ್ರಾಮಕ್ಕೆ ಭೇಟಿ ನೀಡಿ, ಈ ಭಾಗದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದ ಗಾಂಧೀಜಿ ಪ್ರತಿಮೆ ಈಗ ಅದೇ ಗ್ರಾಮದಲ್ಲಿಯೇ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಅತೀವ ಬೇಸರದ ವಿಷಯವಾಗಿದೆ.
ಗಾಂಧೀಜಿ ಜಕ್ಕಲಿಗೆ ಬಂದಿದ್ದು: ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ದಿ. ಅಂದಾನಪ್ಪ ದೊಡ್ಡಮೇಟಿಯವರ ಕರೆ ಮೇರೆಗೆ ಗಾಂಧೀಜಿಯವರು ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಲು 1934 ಮಾರ್ಚ್ 3ರಂದು ತಾಲೂಕಿನ ಜಕ್ಕಲಿ ಗ್ರಾಮಕ್ಕೆ ಬಂದಿದ್ದರು. ಗ್ರಾಮದ ದೊಡ್ಡಮೇಟಿಯವರ ಜಮೀನನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದರು. ಆಗ ಬಿಜಾಪುರ, ರಾಯಚೂರು, ಧಾರವಾಡ ಜಿಲ್ಲೆ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳಿಂದ 25 ಸಾವಿರ ಜನರು 1200ಕ್ಕೂ ಹೆಚ್ಚು ಎತ್ತಿನ ಬಂಡಿಗಳೊಂದಿಗೆ ಆಗಮಿಸಿದ್ದು ಇಲ್ಲಿ ಗಾಂಧೀಜಿ ಭಾಷಣ ಮಾಡಿದ್ದರು.
ಜಕ್ಕಲಿ ಗ್ರಾಮಕ್ಕೆ ಭೇಟಿ ನೀಡಿದ ಗಾಂಧೀಜಿಯವರ ನೆನಪಿಗಾಗಿ ಗಾಂಧಿ ಭವನ ಇಲ್ಲದಿರುವುದು ಬೇಸರ ತಂದಿದೆ. ಅವರ ಸಂದೇಶ, ತತ್ವ, ಆದರ್ಶ ಮತ್ತು ಅಹಿಂಸಾ ಮಾರ್ಗಗಳನ್ನು ಜನತೆಗೆ ತಿಳಿಪಡಿಸುವ ಕಾರ್ಯವಾಗಬೇಕು. ಗಾಂಧೀಜಿ ಮೂರ್ತಿ ಎದುರು ಮದ್ಯಪಾನ ಸೇವನೆ ಮಾಡುವ ಕಿಡಿಗೇಡಿಗಳಿಗೆ ಕಡಿವಾಣ ಹಾಕಬೇಕು. ಈ ದಿಸೆಯಲ್ಲಿ ಜಕ್ಕಲಿ ಗ್ರಾಮದಲ್ಲಿ ಗಾಂಧಿ ಭವನ ನಿರ್ಮಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಇಚ್ಛಾಶಕ್ತಿ ತೋರ್ಪಡಿಸಬೇಕು.
ಟ ಜಕ್ಕಲಿ ಗ್ರಾಮದ ಜನತೆ
ಮಹಾನ್ ವ್ಯಕ್ತಿಗಳ ಮೂರ್ತಿಗಳನ್ನು ಸ್ಥಾಪಿಸುವುದು ದುರಂತಕ್ಕೆ ಕಾರಣ ಎನ್ನಬಹುದು. ನೆಪ ಮಾತ್ರಕ್ಕೆ ಮೂರ್ತಿಗಳನ್ನು ಸ್ಥಾಪಿಸಿ ಕೈಚೆಲ್ಲಿದರೆ ಸಾಲದು. ಅವುಗಳನ್ನು ಸರಿಯಾದ ಸ್ಥಳದಲ್ಲಿ ಸ್ಥಾಪಿಸಬೇಕು. ಜತೆಗೆ ಪಾಲನೆ, ಸಂರಕ್ಷಣೆ ಅತ್ಯಗತ್ಯವಾಗಿದೆ. ಜಕ್ಕಲಿ ಗ್ರಾಮದಲ್ಲಿನ ಗಾಂಧೀಜಿ ಮೂರ್ತಿಯೂ ಸಂರಕ್ಷಣೆ ಮತ್ತು ಸ್ವಚ್ಛತೆಯಿಲ್ಲದೆ ನಿರ್ಲಕ್ಷ್ಯಕ್ಕೊಳಗಾಗಿದೆ. ಕಿಡಗೇಡಿಗಳ ಕಾಟ ಹೆಚ್ಚಾಗಿದ್ದು, ನಿತ್ಯ ರಾತ್ರಿ ಅಲ್ಲಿ ಕುಳಿತು ಮದ್ಯಪಾನ, ಧೂಮಪಾನ ಮಾಡುತ್ತಾರೆ. ಈ ಹಿಂದೆ 2 ಬಾರಿ ಮೂರ್ತಿ ವಿಘ್ನಗೊಳಿಸಿದ್ದರು. ಜಿಲ್ಲಾಡಳಿತ ಮೂರ್ತಿಗೆ ವಜ್ರಲೇಪನ ಮಾಡುವುದಾಗಿ ಹೇಳುತ್ತಲೆ ಬಂದಿದ್ದೂ ಈವರೆಗೂ ಕಾರ್ಯ ಕೈಗೊಂಡಿಲ್ಲ. ಇಲ್ಲಿನ ಗಾಂಧಿ ಮೂರ್ತಿಗೆ ಸೂಕ್ತ ರಕ್ಷಣೆ ಒದಗಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಸ್ಥಳೀಯ ಶಾಸಕ ಜಿ.ಎಸ್. ಪಾಟೀಲ ಅವರ ಇಚ್ಛಾಶಕ್ತಿ ಮುಖ್ಯವಾಗಿದೆ.
- ಜ್ಞಾನದೇವ ದೊಡ್ಡಮೇಟಿ
ದಿ. ಅಂದಾನಪ್ಪ ದೊಡ್ಡಮೇಟಿಯವರ ಪುತ್ರ, ಮಾಜಿ ಶಾಸಕ


-ಪಿ.ಎಸ್. ಪಾಟೀಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.